Skip to main content

Posts

Showing posts from October, 2024

ಹೂ ಜೋಡಣೆ

 ಹೂ ಜೋಡಣೆ  ಭಾಮಿನಿ ಷಟ್ಪದಿ ಅಂದದಿಂದಲಿ ಹೂವ ಜೋಡಿಸಿ ಮಂದಿ ಗಮನವ ಸೆಳೆಯುವಂತೆಯೆ ಚಂದವಿರುವಾ ತರುಣಿ ರೂಪವ ಕೊಟ್ಟು ಬಿಟ್ಟಿಹರು ಹೊಂದಿಸಿಟ್ಟಿಹ ಹೂಗಳೆಲ್ಲವ ಮುಂದೆ ಸೇರುತಲೊಂದುಗೂಡಿಸಿ ಬಂಧ ಬೆಸೆಯುವ ಹೆಣ್ಣಿನಂತೆಯೆ ಮಾಡಿ ಬಿಟ್ಟಿಹರು ಆರ ಕೈಗಳ ಚಳಕವಿದುವೋ ಮೇರು ಕೃತಿಯ ತೆರದಿ ಕಾಣುತ ಬಾರಿ ಬಾರಿಗೂ ಮನವ ಸೆಳೆಯುತ ಕಣ್ಣು ತುಂಬುವುದು ಸೋರಿ ಹೋಗುವ ಸೊಬಗ ಸಿರಿಯಲಿ ನಾರಿ ನಿಂತಳು ಮೊಗವ ತಿರುಗಿಸಿ ಸೀರೆ ಧರಿಸಿದ ಮುಗುದೆ ಮನದಲ್ಲೆನಿತು ನಾಚಿಗೆಯೋ ಪಂಕಜಾ.ಕೆ ರಾಮಭಟ್

ನವದುರ್ಗೆ

;ಭಕ್ತಿಗೀತೆ ನವದುರ್ಗೆ ಅರ್ಧ ಚಂದ್ರನ ತಿಲಕ ಧರಿಸಿದ ಚಂದ್ರಘಂಟಾ ದೇವಿ ಬೇಡುವೆ ಚಂದದಿಂದಲಿ ಹರಸು ನಮ್ಮನು ತಾಯಿ ಪಾರ್ವತಿಯೇ ಬಂಧನದಿ ಸಿಲುಕಿರುವ ಲೋಗರ ಕಂದನಂತೆಯೇ ಕಾಯುತಿರುತಲಿ ಸುಂದರಾಂಗಿಯೇ ಪಾಲಿಸೆಮ್ಮನು ಮಾತೆ  ಶಾರದೆಯೇ ಹರಿದ್ರಾ ಕುಂಕುಮವನರ್ಪಿಸಿ ನಿನ್ನ ಚರಿತೆಯ ಪಾಡಿ ಪೊಗಳುವೆ ಮಂಗಳಾಂಗಿಯೇ ನಿನ್ನ ಸ್ತುತಿಸುತ ಶಿರವ ಬಾಗುವೆನು ವಿವಿಧ ಹೂಗಳನರ್ಪಿಸುತ್ತಲಿ ಗಂಧ ಚಂದನದಿಂದ ಪೂಜಿಸಿ ಕುಂಕುಮಾರ್ಚನೆಯನ್ನು ಮಾಡುತ ಮೈಯ ಮರೆಯುವೆನು ನವರಾತ್ರಿಯ ನವದಿನದಲೂ ನವವಿಧದಿಂದಲರ್ಚಿಸಿ ನಾಮ ಪಠಿಸುತ ಬಕುತಿಯಿಂದಲಿ ಬೇಡಿಕೊಳ್ಳುವೆನು ಬಕುತಿ ಭಾವವ ತುಂಬಿ ಮನದಲಿ ಬಾವಶುದ್ಧಿಯಲಿದ್ದು ಬೇಡುವೆ ಸಕಲ ಕಷ್ಟವ ಕಳೆದು ಬಿಡುತಲಿ ಹರಸು ನೀನೆಂದು ಪಂಕಜಾ. ಕೆ.ರಾಮಭಟ್