ಸೊಬಗಿನ ಸಿರಿ
ಚಿತ್ರಕವನ
(ಭಾಮಿನಿ ಷಟ್ಪದಿಯಲ್ಲಿ)
ಹಸಿರು ತುಂಬಿದ ಗದ್ದೆ ಬಯಲಲಿ
ಬಸಿದು ಸೋರುವ ಸಿರಿಯ ಸೊಬಗಲಿ
ಹೊಸತು ಭಾವವ ತುಂಬಿ ತುಳುಕುತ ತನುವು ಕುಣಿಯುತಿದೆ
ಬೆಸೆದ ಬಂಧದ ತೆರದಿ ಗುಡ್ಡವು
ಹೊಸೆದು ಬಿಟ್ಟಿದೆ ಬಾನ ಬಯಲನು
ಹಸಿತ ಮನದಲಿ ಕನಸ ಬಿತ್ತುತ ಸೊಬಗ ತೋರುತಿದೆ
ಬಾನ ಬಯಲಲಿ ರಂಗು ತುಂಬುತ
ಬಾನ ರಾಜನು ಮೂಡಿ ಬಂದನು
ಸೋನೆ ಮಳೆಯಲಿ ನೆನೆದ ಭಾವವು ಮನದಿ ತುಂಬುತಿದೆ
ಕಾನನದ ಸಿರಿ ತುಂಬಿ ತುಳುಕಿದ
ತಾಣ ಕಾಣಲು ತನುವು ಮರೆಯಿತು
ಮೇನೆಯೇರಿದ ರಾಜನಂತೆಯೆ ಹರುಷವುಕ್ಕುತಿದೆ
ಜಗವ ಮರೆಸುವ ನೋಟ ನೋಡುತ
ಸೊಗವು ತುಂಬಿತು ಮನದ ಬಯಲಲಿ
ಬಗೆಯ ಸೆಳೆಯುವ ಚಿತ್ರ ಮನದಲಿ ಕನಸ ಬಿತ್ತಿಹುದು
ನಗೆಯು ಮೊಗದಲಿ ಚಿಮ್ಮುತಿರುವುದು
ಹಗೆಯು. ಕಳೆಯುತ ನೇಹ ಮೂಡಿತು
ಜಗದ ಜಂಜಡ ಕಳೆದು ಮನಸಿಗೆ ಶಾಂತಿ ತುಂಬುವುದು
ಪಂಕಜಾ. ಕೆ.ರಾಮಭಟ್
Comments
Post a Comment