ರಾಮಕಥೆ 1
(ಭಾಮಿನಿ ಷಟ್ಪದಿ )
ರಾಮ ಕಥೆಯನು ಮನದಿ ನೆನೆಯುತ
ನೇಮ ನಿಷ್ಠೆಯ ಮಾಡಿ ಮುನಿವರ
ಧಾಮದೆಡೆ ಬರುತಿರಲು ಕಂಡನು ತರುಣ ಹಕ್ಕಿಗಳ
ಪ್ರೇಮ ಜೋಡಿಯು ಸರಸದಾಟದಿ
ಕಾಮಿಸುತಲಿರುವಂಥ ಸಮಯದಿ
ಕಾಮ ಬಾಣದ ತೆರದಿ ಬೇಡನು ಬಾಣ ಹೂಡಿದನು
ಬೇಡ ಬೀಸಿದ ಬಾಣ ತಗಲಲು
ಬಾಡಿ ಬಿದ್ದಿತು ಪಕ್ಷಿ ದೇಹವು
ನೋಡಿ ಮುನಿವರ ಕೋಪದಿಂದಲಿ ಶಾಪ ಕೊಟ್ಟಿಹನು
ಜೋಡಿ ಹಕ್ಕಿಯ ಪ್ರಾಣ ಸಂಕಟ
ಮಾಡಿ ಬಿಟ್ಟಿತು ಮನಕೆ ಬೇಸರ
ಕಾಡುತಿರುತಲಿ ರಾಮ ಸೀತೆಯ ಕಥೆಯು ಮನಸಿನಲಿ
ಕೊರಗುತಿರುವಾ ಮುನಿಯ ಕಾಣುತ
ಭರಧಿ ಬಂದನು ಬ್ರಹ್ಮ ದೇವನು
ಹರಿಸಿದಂತಹ ಮಾತು ಶ್ಲೋಕದ ತೆರದಲಿರುತಿಹುದು
ಕರವ ಹಿಡಿಯುತ ತಿಳಿಸಿದವನಲಿ
ವರವ ಕೊಟ್ಟನು ಮನದಿ ಮೂಡಲು
ಮರುಗದಿರು ನೀ ರಾಮ ಸೀತೆಯ ಕಾವ್ಯ ಬರೆಯೆಂದ
ಪಂಕಜಾ.ಕೆ. ರಾಮಭಟ್
Comments
Post a Comment