ರಾಮಕಥೆ 4
ರಾಮನ ಜನನ
ಭಾಮಿನಿ ಷಟ್ಪದಿಯಲ್ಲಿ
ಪಂಕಜಾ ಕೆ ರಾಮಭಟ್
ಯಾಗ ಮಾಡಿದ ಪುಣ್ಯ ಫಲದಲಿ
ಬೇಗ ಮೂಡಿತು ಕುಡಿಯು ಗರ್ಭದಿ
ಬೀಗಿ ಬಿಟ್ಟನು ರಾಜ ದಶರಥ ತುಂಬು ಸಂತಸದಿ
ಸಾಗಿ ದಿನಗಳು ಕಳೆದು ಬೇಗನೆ
ಮಾಗಿ ಶುಭದಿನದಂದು ರಘುವರ
ನೀಗಿ ತಾಯಿಯ ಕಷ್ಟವೆಲ್ಲವ ಧರೆಗೆ ಬಂದಿಹನು
ಬಾಲರಾಮನು ಲೀಲೆ ತೋರುತ
ಹಾಲು ಕುಡಿಯುತ ಬೆಳೆದು ಬಿಟ್ಟನು
ಕಾಲಸರಿಯುತಲಿರಲು ಕಲಿತನು ಸಕಲ ವಿದ್ಯೆಗಳ
ಗೋಳು ಹೇಳುತ ಬಂದ ಮುನಿಗಳು
ನಾಳೆ ರಾಮನ ಕಳಿಸಿರೆನ್ನುತ
ವೇಳೆ ಬಂದಿದೆ ರಾಜಪುತ್ರರ ಶಕ್ತಿ ಮೆರೆಯಲಿಕೆ
ಅನುಜ ಲಕ್ಷ್ಮಣನೊಡನೆ ವನದಲಿ
ಮುನಿಗಳೆಲ್ಲರ ಸೇವೆ ಮಾಡುತ
ಮನನ ಮಾಡಿದನವರು ಕಲಿಸಿದ ವಿದ್ಯೆ ಬುದ್ದಿಗಳಾ
ಹನಿಸಿ ತನ್ನಯ ಬೆವರ ಹನಿಗಳ
ಮನೆಯ ತೊರೆದರು ಕ್ಲೇಶ ಪಡದೆಯೆ
ಮುನಿವರರಿಗೇ ಕಷ್ಟ ಕೊಡುತಿಹ ರಕ್ಕಸರ ತರಿದು
ತಾನು ಮಾಡಿದ ಯಜ್ಞ ಮುಗಿಯಲು
ಮೇನೆಯಿಲ್ಲದೆ ನಡೆದು ಬರುತಿರೆ
ಕಾನನವು ಕಳೆದಾಗ ಸಿಕ್ಕಿತು ಮಿಥಿಲೆ ಪಟ್ಟಣವು
ಮಾನಿನಿಯು ತಾ ಪಡೆದ ಶಾಪದಿ
ಧೇನಿಸುತ್ತಲಿ ರಾಮನಾಮವ
ಕಾನನದ ಬದಿಯಲ್ಲಿ ಶಿಲೆಯಂತಾಗಿ ಬಿದ್ದಿಹಳು
ಪಂಕಜಾ .ಕೆ. ರಾಮಭಟ್
Comments
Post a Comment