ಮಧು ಮಾಸ
ಕತ್ತನೆತ್ತಲು ಸುತ್ತು ಮುತ್ತಲು ಹಸಿರು ಹಂದರ ಹಾಸಿದೆ
ಚಿತ್ತವನ್ನು ಸೆಳೆದು ಬಿಡುತಲಿ ಬೇವು ಮಾವು ಚಿಗುರಿದೆ
ನೆತ್ತಿ ಸುಡುವ ಬಿಸಿಲ ಝಳದಲೂ ತಂಪು ಗಾಳಿಯ ಬೀಸಿದೆ
ಕತ್ತಿ ಮಸೆಯದೇ ವಸುಧೆಯೊಡಲನು ಉಳಿಸಿ ಬೆಳೆಸಬೇಕಿದೆ
ಮಾಮರದಲಿ ಕುಳಿತು ಕೋಗಿಲೆ ಮಧುರ ಗಾನವ ಹಾಡಿದೆ
ಚಾಮರವ ಬೀಸುತಲಿ ತರುಲತೆಗಳು ನಲಿದಿವೆ
ಭೂಮಿ ತಾಯಿಯ ಮಡಿಲಿನಲ್ಲಿ ನವೋಲ್ಲಾಸ ಮೂಡಿದೆ
ಬಾನಿನೆತ್ತರ ಬೆಳೆದ ಮರಗಳು ಫಲವ ತುಂಬಿ ಬಾಗಿದೆ
ವಸಂತ ಋತುವಿನ ಸೊಬಗ ಕಾಣಲು ಎರಡು ಕಣ್ಣು ಸಾಲದು
ಹೊಸತು ಭಾವವ ಮನದಿ ತುಂಬಿದೆ ಹೂವು ಹಣ್ಣುಗಳ ಸಾಲದು
ಹಸಿರು ಚಿಗುರಿದ ಗಿಡಮರಗಳು ತಲೆಯ ತೂಗುವ ಪರಿಯಲಿ
ರಸಿಕ ಮನಗಳು ನಲಿಯುತಿದೆ ಹಸಿರು ತುಂಬಿದ ಧರೆಯಲಿ
ಪಂಕಜಾ. ಕೆ.ರಾಮಭಟ್
Comments
Post a Comment