ಅರಿವು ಮೂಡಿದಾಗ
ಶ್ರೀಮಂತನಾದ ರಮೇಶನಿಗೆ ತಂದೆ ಕೇಳಿ ಕೇಳಿದಾಗಳೆಲ್ಲಾ ಹಣ ಕೊಡುತ್ತಿದ್ದುದರಿಂದ , ಹಣದ ಬೆಲೆ ತಿಳಿದಿರಲಿಲ್ಲ . ಕಾಲೇಜಿಗೆ ನೆಪ ಮಾತ್ರಕ್ಕೆ ಹೋಗುತ್ತಾ ಗೆಳೆಯರ ಜತೆ ಅಲ್ಲಿ ಇಲ್ಲಿ ತಿರುಗಾಡಿ ಮಜಾ ಮಾಡುವುದೇ ಅವನ ಕಾಯಕವಾಗಿತ್ತು. ಬಡವರೆಂದರೆ ತಾತ್ಸಾರ ಮನೊಭಾವ ಹೊಂದಿದ್ದ ಆತ, ಹರಿದ ಬಟ್ಟೆ ಹಾಕಿದ ಬಡವರನ್ನು ಕಂಡರೆ ದೂರ ಸರಿಯುತ್ತಿದ್ದ.
ಒಂದು ದಿನ ಸ್ನೇಹಿತರೆಲ್ಲ ಸೇರಿ ಜಾಲಿ ರೈಡ್ ಹೋಗುವುದೆಂದು ನಿರ್ಣಯಿಸಿದರು. ನಿಶ್ಚಿತ ಸ್ಥಳಕ್ಕೆ ಯಾರು ಮೊದಲು ತಲುಪುತ್ತಾರೋ. ಅವರಿಗೆ 10000 ಬಹುಮಾನ ಎಂದು ಘೋಷಿಸಿದ ರಮೇಶ, ತಾನು ಅವರ ಜತೆ ತನ್ನ ಬೈಕಿನಲ್ಲಿ ಹೊರಡುವ ನಿರ್ಧಾರ ಮಾಡಿದ. ಎಲ್ಲರೂ ಒಂದೊಂದು ದಾರಿ ಹಿಡಿದು ತಮ್ಮತಮ್ಮ ಬೈಕ್ ಚಲಾಯಿಸಿದರು. ರಮೇಶನೂ ವೇಗವಾಗಿ ಬೈಕ್ ಓಡಿಸುತ್ತಾ ಇರುವಾಗ ತಿರುವಿನಲ್ಲಿ ಆಯ ತಪ್ಪಿ ಕೆಳಗಿನ ಪ್ರಪಾತಕ್ಕೆ ಬೈಕ್ ಸಮೇತ ಉರುಳಿ ಬಿಟ್ಟ .
ಕಣ್ಣು ಬಿಟ್ಟಾಗ ತಾನೊಂದು ಹುಲ್ಲಿನ ಗುಡಿಸಿಲಿನಲ್ಲಿ ಇರುವುದು ತಿಳಿದು ಆತ ಮೆಲ್ಲಗೆ ಏಳಲು ಪ್ರಯತ್ನಿಸಿದಾಗ , ಮೈ ಕೈಯೆಲ್ಲ ನೋವಾಗಿ ಸಣ್ಣಗೆ ನರಳಿದ .ಅಷ್ಟರಲ್ಲಿ ಅಲ್ಲಿಗೆ ಬಂದ ಕೆದರಿದ ಕೂದಲ ಹರಿದ ಬಟ್ಟೆ ತೊಟ್ಟ ಒಬ್ಬ ತರುಣ ಅವನನ್ನು ಹಿಡಿದು ಮೃದುವಾಗಿ ಗೋಡೆಗೆ ಒರಗಿಸಿ ಕುಳಿತುಕೊಳ್ಳಲು ಸಹಾಯ ಮಾಡಿ,ಅಣ್ಣಾ ಈಗ ಹೇಗಿದ್ದೀರಿ? ನೋವು ಕಡಿಮೆಯಾಗಿದೆಯೇ ?ಎಂದು ವಿಚಾರಿಸಿ ತಾನು ತಂದ ಪಾನೀಯವನ್ನು ನಿಧಾನವಾಗಿ ಕುಡಿಸಿ ಮಲಗಿಸಿ ತನ್ನ ಕೆಲಸಕ್ಕೆ ಹೊರಟನು. . ನಿದ್ದೆ ಬಾರದೆ ಕಣ್ಣು ಮುಚ್ಚಿ ಮಲಗಿದ್ದ ರಮೇಶನಿಗೆ ಒಳಗಿನ ಸಂಭಾಷಣೆ ಕೇಳುತ್ತಿತ್ತು. ಮನೆಯಲ್ಲಿ ಸಾಮಾನು ಇಲ್ಲ.ಶೆಟ್ಟರ ಅಂಗಡಿಯ ಸಾಲ ಹನುಮಂತನ ಬಾಲದಂತೆ ಬೆಳೆದಿದೆ . ಈಗ ಒಂದುವಾರದಿಂದ ನಾನು ಕೆಲಸಕ್ಕೆ ಹೋಗಲು ಆಗಲಿಲ್ಲ ಇಂದಾದರು ಅವನಿಗೆ ಪ್ರಜ್ಞೆ ಬಂದರೆ ನಾನು ಕೆಲಸಕ್ಕೆ ಹೋಗಬಹುದು ಇಲ್ಲದಿದ್ದರೆ ನಾಳೆಯಿಂದ ತಣ್ಣೀರು ಕುಡಿದು ಮಲಗಬೇಕಾದೀತು .ನಮಗೆ ಇದು ಅಭ್ಯಾಸವಾಗಿದೆ.ಅದರೆ ಆ ಮಗುವಿನ ಹೊಟ್ಟೆಗಾದರೂ ಏನಾದರೂ ಕೊಡಬೇಕಲ್ಲ ಎಂದು ಹೇಳಿದ್ದು ಕೇಳಿ ರಮೇಶನಿಗೆ ಅವರಮನೆ ಪರಿಸ್ಥಿತಿ ಅರಿವಾಯಿತು
.ಬಡವರೆಂದರೆ ತಾತ್ಸಾರವಿದ್ದ ಅವನಿಗೆ ಈ ಘಟನೆಯಿಂದ ಮನ ಪರಿವರ್ತನೆಯಾಯಿತು. ತಾನು ಒಂದು ದಿನದಲ್ಲಿ ಖರ್ಚು ಮಾಡುವ ಹಣದಲ್ಲಿ ಬಡವರು ಒಂದು ತಿಂಗಳು ಹೊಟ್ಟೆ ತುಂಬಿಸಬಹುದೆನ್ನುವ ಅರಿವಾದುದೆ, ಆತ ಒಂದು ದೃಢ ನಿರ್ಧಾರಕ್ಕೆ ಬಂದ ತಾನು ಅವರನ್ನು ಒಪ್ಪಿಸಿ ತಮ್ಮ ಮನೆಗೆ ಅವರನ್ನು ಕರೆದೊಯ್ಯಬೇಕು ಮುಂದೆ ಹಣವನ್ನು ಹಾಳು ಮಾಡದೆ ಬಡ ಮಕ್ಕಳ ಕಲ್ಯಾಣಕ್ಕಾಗಿ ಅದನ್ನು ಸದ್ವಿನಿಯೋಗಿಸಬೇಕೆಂದು ನಿರ್ಧರಿಸಿದ .
ಅದರಂತೆ ಆ ದಂಪತಿಗಳನ್ನು ಒಪ್ಪಿಸಿ ಅಂದೆ ಅವರನ್ನು ಕರೆದುಕೊಂಡು ತನ್ನ ಮನೆಗೆ ಬಂದಾಗ ತಿಂಗಳಿನಿಂದ ಮಗನ ಸುಳಿವು ಇಲ್ಲದೆ ನೊಂದಿದ್ದ ತಂದೆ ತಾಯಿ ಖುಷಿಯಿಂದ ಅವನನ್ನು ತಬ್ಬಿಕೊಂಡರು. ಅವನನ್ನು ಬದುಕಿಸಿ ಮರಳಿ ತಮಗೆ ಒಪ್ಪಿಸಿದ ದಂಪತಿಗಳನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡರು..ಮಗನ ಮನ ಪರಿವರ್ತನೆಯಾದುದು ತಿಳಿದು ತಂದೆ ತಾಯಿ ತುಂಬಾ ಖುಷಿ ಪಟ್ಟು ಕಾಣದ ದೇವರಿಗೆ ಭಕ್ತಿಯಿಂದ ಕೈ ಮುಗಿದರು.
ಪಂಕಜಾ.ಕೆ. ಮುಡಿಪು
Comments
Post a Comment