ಗುರುಭ್ಯೋ ನಮಃ
(ಭಾಮಿನಿ ಷಟ್ಪದಿ )
ಗುರುವೆ ನಿನ್ನಯ ಚರಣ ಕಮಲಕೆ
ಶಿರವ ಬಾಗಿಸಿ ನಮಿಸುತಿರುವೆನು
ಹರಸುಯೆನ್ನನು ಮತಿಯ ಕರುಣಿಸಿ ಅಭಯ ತೋರುತಲಿ
ಬರಿದೆ ನಾಮವ ಪಠಿಸುತಿರುತಲಿ
ಹರನ ರೂಪದ ಗುರುವ ನೆನೆಯಲು
ಕರಗಿ ಹೋಯಿತು ಸಕಲ ಕಷ್ಟಗಳೆಲ್ಲ ಬೇಗದಲಿ
ತಂದೆ ರಾಮನ ಕಥೆಯ ಹೇಳುತ
ಚಂದದಿಂದಲಿ ಹಾಡಿ ಹೊಗಳುತ
ನಿಂದೆ ನೀ ಜಗದಲ್ಲಿ ಬಾನಿನ ತಾರೆಯಂತಿರುತ
ತಂದೆಯಂತೆಯೆ ಶಿಷ್ಯ ಗಡಣವ
ಹಿಂದೆ ನೀನಿರುತಿದ್ದು ನಡೆಸುತ
ಮುಂದೆ ಸಾಗಲು ಮುಕುತಿ ಮಾರ್ಗವ ತೋರಿ ಹರಸುತ್ತ
ಮಾತು ಬಾರದ ಗೋವು ಸಂತತಿ
ಭೀತಿಗೊಳಗಾಗಿರುವ ಸಮಯದಿ
ಜಾತಿ ಬೇಧವ ಮರೆತು ಗೋವಿನ ರಕ್ಷಣೆಗೆ ನಿಂತೆ
ಖ್ಯಾತಿ ಬಯಸದೆ ಮಗುವ ತೆರದಲಿ
ನೀತಿ ನಿಯಮವ ಪಾಲಿಸುತ್ತಲಿ
ಜ್ಯೋತಿಯಂತೆಯೆ ಜಗವ ಬೆಳಗಲು ಫಣವ ತೊಟ್ಟಿರುವೆ
ಹಾದಿ ತಪ್ಪಿದ ಜನರ ಸೇರಿಸಿ
ಸಾಧಿಸುವ ಛಲವನ್ನು ಬಿತ್ತುತ
ಮೇದಿನಿಯಲೆಲ್ಲೆಡೆಗೆ ನಿನ್ನಯ ಛಾಪನೊತ್ತಿ ರುವೆ
ಬಾಧಿಸುವ ಚಿಂತೆಗಳ ತೊಳೆಯುತ
ಬಾಧೆ ಕಳೆಯುತಲವರ ಮನಸಿಗೆ
ಹಾದಿ ತೋರುವ ದಾರಿ ದೀಪದ ತೆರದಲಿರುತಿರುವೆ
ರಾಘವೇಶ್ವರನೆಂಬ ನಾಮದಿ
ಸಾಗಿ ಬರುತಿರಲಾಗ ಸಭೆಯೆಡೆ
ಬಾಗಿ ನಮಿಸುವರೆಲ್ಲ ಗುರುವಿನ ಚರಣ ಧೇನಿಸುತ
ಬೇಗ ಬೇಗನೆ ನಡೆದು ಬರುತಲಿ
ನೀಗಿಸುವೆ ನೀಯವರ ಕಷ್ಟವ
ಸೋಗು ಹಾಕದೆ ಕರುಣೆಯಿಂದಲಿ ಹರಸಿ ಹಾರೈಸಿ
ಬಂಧಿಸುವ ಮಂದಿಯರ ಕೆಡವುತ
ಸಂಧಿ ಕಾಲದಿ ರಾಮನಾಮವ
ನಿಂದು ಪಠಿಸುವ ಭಾಗ್ಯವನು ನೀ ಕೊಟ್ಟು ಸಲಹೆನ್ನ
ಚಂದದಿಂದಲಿ ನಿನ್ನ ನಾಮವ
ಮುಂದೆ ನಿಲ್ಲುತ ಪಾಡಿ ಹೊಗಳುತ
ವಂದಿಸುವೆ ಗುರು ನಿನ್ನ ಚರಣಕೆ ತಲೆಯ ಬಾಗುತ್ತ
ಪಂಕಜಾ.ಕೆ.ರಾಮಭಟ್. ಮುಡಿಪು
Comments
Post a Comment