*ದಿನಮಣಿ*
ಬಾನಿನಾ ಬಯಲಿನಲಿ ಬಳಿಯುತ್ತ ರಂಗನ್ನು
ಮೂಡಿದನು ಮೂಡಣದಲಿ
ಕಾಡಿನಾ ತರುಲತೆಯ ಖುಷಿಯಲ್ಲಿ ತಬ್ಬುತ್ತ
ಇಣುಕುವನು ಬಾಂದಳದಲಿ
ಮಂಜಿನಾ ತೆರೆಯನ್ನು ಸರಿಸುತ್ತ ಬರುತಿಹನು
ದಿನಮಣಿಯು ಸಂಭ್ರಮದಲಿ
ಹಬ್ಬಿದಾ ಹಿಮಮಣಿಯ ಮುದ್ದಿಸುತಲವನು
ಧರೆಯೆಡೆಗೆ ತವಕದಲಿ
ಮುಂಜಾನೆಯ ಸೊಬಗನ್ನು ಕಣ್ಮನಕೆ ತುಂಬುತ್ತ
ತರುಲತೆಯ ಮುದ್ದಿಸುತಲಿ
ಪರಿಮಳವ ಬೀರುತ್ತ ಅರಳುತಿವೆ ಹೂವುಗಳು
ದುಂಬಿಗಳ ಕರೆಯುತ್ತಲಿ
ಮೂಡಣದ ಬಾನಿನಲಿ ಮೂಡಿರುವ ಚಿತ್ತಾರ
ರಸಿಕರನು ಸೆಳೆಯುತ್ತಿದೆ
ಜಡತೆಯನು ಕಳೆಯುತ್ತ ಹೊಸತನವ ತುಂಬುತ್ತ
ಮೈಮನವ ಮರೆಸುತ್ತಿದೆ
*ಶ್ರೀಮತಿ. ಪಂಕಜಾ.ಕೆ. ರಾಮಭಟ್*
Comments
Post a Comment