*ಅರ್ಜುನನ ವಿಷಾದ*
ಪರಿವರ್ಧಿನಿ ಷಟ್ಪದಿ
ತಾತನು ಭೀಷ್ಮನು ಗುರುಗಳು ಸುಜನರು
ಮಾತಿಗೆ ಸಿಲುಕದ ಬಂಧವ ಬೆಸೆದಿಹ
ಖ್ಯಾತಿಯ ಪಡೆದಿರುವವರನು ಕಾಣುತ ಪಾರ್ಥನು ನೊಂದಿಹನು
ನಾಥನೆ ಮಾಧವ ಬೇಡವಿದೆನಗಿದು
ಮಾತೆಯರೆಲ್ಲರ ದುಃಖದಿ ಮುಳುಗಿಸಿ
ಸೋತರೆ ಚಿಂತಿಸಲಾರೆನೆನುತಲೀ ಶಸ್ತ್ರವ ಕೆಳಗಿಟ್ಟ
ಹೇಳಿದ ಮಾತನು ಕೇಳುತ ಕೇಶವ
ಬಾಳಿನ ತಿರುಳಿನ ಗೀತೆಯ ಬೋಧಿಸಿ
ಸೋಲಿನ ಭಯವನು ಕಳೆಯುತ ನೀತಿಯ ಪಾಠವ ತಿಳಿಸಿದನು.
ಕಾಲನ ಕರದೊಳಗಿರುತಿಹ ಜೀವವು
ಬೀಳಲು ಬೇಕಿದೆ ನೆಪವೆಂದೆನುತಲಿ
ಹೇಳಿದ ಕೇಶವ ಪಾರ್ಥ ನೀನಿದರಲ್ಲಿ ನಿಮಿತ್ತ ಮಾತ್ರವನೈ
ಗೀತೆಯ ಸಾರವ ಬೋಧಿಸುತಿರುತಲಿ
ಮಾತಲಿ ಸಿಲುಕಿಸುತರ್ಜುನನೆದೆಯಾ
ಭೀತಿಯ ತೊಲಗಿಸಿ ರಣದಲಿ ಸೆಣೆಸಲು ಸಜ್ಜನು ಮಾಡಿದನು
ನೀತಿಯ ಮಾತನು ಕೇಳಿದ ಪಾರ್ಥನು
ಮಾತಿಲ್ಲದೆಯೇ ಬಿಗಿದನು ಹೆದೆಯನು
ಹೇತುವು ತಾನಿದರಲಿಯೆನ್ನುತ್ತವಿಷಾದವ ಕಳೆದೊಗೆದ
*ಪಂಕಜಾ . ಕೆ.ರಾಮಭಟ್*
Comments
Post a Comment