*ಮುಳುಗುವ ಸೂರ್ಯ*
ಪಡುವಣ ಕಡಲಲಿ ಬಿಂಬವ ಕಲಸುತ
ನಡೆದನು ರವಿಯು ಮನೆಯೆಡೆಗೆ
ಕಡಲಿನ ತಡಿಯಲಿ ಕುಳಿತಿಹ ಮೊಲಗಳು
ನಡೆಯುವ ವಿಸ್ಮಯ ನೋಡುತಿವೆ
ಕುಂಚದಿ ಬರೆದಿಹ ಚಿತ್ರದ ತೆರದಲಿ
ಕೊಂಚವೆ ಮನವನು ಸೆಳೆಯುತಿದೆ
ಮಂಚಕೆ ಕರೆದಿಹ ನಿಶೆ ಒಡನಾಡಲು
ಹೊಂಚಿದ ಸಮಯವು ಸರಿಯುತಿದೆ
ಬಾನಿನ ಬಣ್ಣವು ನೀರಲಿ ಮೂಡಿದೆ
ಕಾನನವೆಲ್ಲವೂ ಕೆಂಪಾಗಿ
ಜೇನಿನ ಸವಿಯನು ಜಗದಲಿ ತುಂಬಿಸಿ
ಬಾನಲಿ ಸರಿದನು ತಂಪಾಗಿ
ಚಿನ್ನದ ಬಣ್ಣದಿ ಹೊಳೆಯುವ ಶರಧಿ
ಕಣ್ಣನು ಬೇಗನೆ ಸೆಳೆಯುತಿದೆ
ಸಣ್ಣನೆ ರಾಗದಿ ಹಾಡುವ ಬಯಕೆಯು
ನನ್ನಯ ಮನದಲಿ ಮೂಡುತಿದೆ
*ಪಂಕಜಾ. ಕೆ.ರಾಮಭಟ್*
Comments
Post a Comment