ರಸ ಗಂಗೆ
ಬರೆದಿರುವ ಸಾಹಿತ್ಯ
ಸೆರೆಹಿಡಿದು ಬಿಡಬೇಕು
ತೆರೆಯುತಲಿ ಮಸ್ತಕದ ಪುಟಗಳನ್ನು
ಹರಿಯುತಿಹ ರಸಗಂಗೆ
ಕರಗಿಸಲು ಬೇಸರವ
ಮರೆಸುತಿದೆ ಮನಸಿನಾ ಚಿಂತೆಯನ್ನು
ಕವಿಮನದ ಭಾವನೆಯು
ಸವಿಪಾಕದಂತಿರುತ
ಸವಿಯಲಿಕೆ ಬೇಕಿಹುದು ರಸಿಕಮನವು
ಬುವಿಯಲ್ಲಿ ತುಂಬಿರುವ
ಸವಿಯಾದ ವಿಷಯಗಳು
ನವಿರಾದ ಮನದಿಂದ ಹೊಮ್ಮಿರುವವು
ಹದವಾಗಿ ಬೆರೆಸುತ್ತ
ಪದಗಳಲಿ ಹಿಡಿದಿಡಲು
ಮಧು ಹೀರುವಾನಂದ ಸವಿ ಮನಸಿಗೆ
ಎದೆತೆರೆದು ಹಾಡುತಿರೆ
ಸದೆಬಡಿದು ಬಿಡುತಿಹುದು
ಗದೆಯಂತೆ ಕುಳಿತಿರುವ ಕಡುಚಿಂತೆಯ
ಪಂಕಜಾ. ಕೆ.ರಾಮಭಟ್
Comments
Post a Comment