*ನಮಿಸುವೆ ದೇವಿ*
(ಭಾಮಿನಿ ಷಟ್ಪದಿ )
ಚರಣ ಕಮಲಕೆ ಬಾಗಿ. ನಮಿಸುತ
ಹರನ ಮಡದಿಯೆ ಬೇಡಿಕೊಳ್ಳುವೆ
ಹರಸು ನಮ್ಮನು ಮಾತೆ ಪಾರ್ವತಿ ಬೇಗ ನೀ ಬಂದು
ವರದ ಹಸ್ತವ ಶಿರದಲಿಡುತಲಿ
ಭರದಿ ಬಾ ನವರಾತ್ರಿ ದಿನದಲಿ
ಕರವ ಮುಗಿಯುತ ನಿನ್ನ ಚರಣಕೆ ತಲೆಯ ಬಾಗುವೆನು
ಕರದಿ ಹಿಡಿದಿಹ ಪುಷ್ಪವೆಲ್ಲವ-
-ನಿರಿಸಿ ನಿನ್ನಯ ಪಾದ ಹಿಡಿಯುವೆ
ತೊರೆದು ಮನಸಿನ ಕಾಮನೆಗಳನು ನಿನ್ನ ಪದತಲದಿ
ಮರಣ ಕಾಲಕೆ ನಾಮ ಪಠಿಸಲು
ಮರೆತು ಹೋಗದ ತೆರದಲೆನ್ನನು
ಹರಸಿ ತುಂಬಿಸು ನಿನ್ನ ಜಪವನು ನನ್ನ ಮಸ್ತಕದಿ
ನವದಿನದಲೂ ಪೂಜೆ ಮಾಡುತ
ಕವನ ಮಾಲೆಯ ಕಟ್ಟಿ ಹಾಡುವೆ
ಭವಿತವೆಲ್ಲವು ಸುಖದಿ ಕಳೆಯಲು ಹರಸು ಹೇ ಗೌರಿ
ಕವಿದ ಮುಸುಕನು ಸರಿಸಿ ಬಿಡುತಲಿ
ಭವದ ಬನ್ನವ ನೀಗಿಸುತ್ತಲಿ
ನೆವನ. ಹೇಳದೆ ಪಾಲಿಸೆನ್ನನು ತಾಯಿ ದುರ್ಗಾಂಬೆ
*ಪಂಕಜಾ. ಕೆ.ರಾಮಭಟ್*
Comments
Post a Comment