ಹಸಿರಿನ ವನಸಿರಿ
(ಒತ್ತಕ್ಷರವಿಲ್ಲದ ಕವಿತೆ)
ಮಾಗಿಯ ಚಳಿಯಲಿ ಬೀಗುತ ನಿಂತಿದೆ
ಸೋಗನು ಹಾಕದ ಗಿಡಮರವು
ಸಾಗುವ ಮೋಡವು ಸೆಳೆಯಿತು ಕಂಗಳ
ರಾಗದಿ ಹಾಡಿದೆ ಕೋಗಿಲೆಯು
ಕಾಡುತಿದೆ ನೆನಪು ಎದೆಯನು ಹಿಂಡುತ
ಮನವನು ಪೀಡಿಸಿ ಬಿಡುತಿಹುದು
ಗಾಳಿಗೆ ತೊನೆಯುವ ಹಸಿರಿನ ಗಿಡಗಳು
ಮನಸಿಗೆ ಶಾಂತಿಯ ಕೊಡುತಿಹುದು
ಹೂಗಳು ಅರಳುತ ಗಂಧವ ಸೂಸಿದೆ
ದುಂಬಿಯು ಮಧುವನು ಹೀರುತಿದೆ
ಮನಸಿನ ಬೇಸರ ಕಳೆಯುವ ತಾಣವು
ಸೊಬಗಿನ ಸಿರಿ ಮನ ತಣಿಸುತಿದೆ
ನೋಡುವ ಕಂಗಳಿಗೆ ತಂಪನು ತರುತಿದೆ
ಉಸಿರನು ಕೊಡುತಿದೆ ತನುಮನಕೆ
ಹರಿಯುವ ನೀರಿನ ಮಂಜುಳ ನಾದವು
ಕಳೆಯಿತು ಮನಸಿನ ಬೇಸರವ
ಪಂಕಜಾ. ಕೆ.ರಾಮಭಟ್
Comments
Post a Comment