Skip to main content

10

[21/8/2019, 7:41 PM] pankajarambhat: ನಿನ್ನಾಟ

ಮನದಲಿ ನೂರಾರು ಆಸೆಗಳ ತುಂಬಿ
ನಿನ್ನಾಗಮನಕೆ ಎದೆತೆರೆದು ಕಾಯುತ್ತಿದ್ದೆ
ಆಸೆಯ ಕರಿಮುಗಿಲು ಮನದಲಿ ಕಟ್ಟಿ
ಹಸಿರು ಹೂಬಳ್ಳಿ ಚಿಗುರಿಸುವ  ನಿರೀಕ್ಷೆಯಲಿದ್ದೆ

ಆಸೆ ನಿರಾಸೆಗಳ ತಾಕಲಾಟದಲಿರಲು
ಮುದ್ದಾಡುತ ನೀಬಂದು ಮೈಮರೆಸಿ ಬಿಟ್ಟೆ
ಒಡಲು ತುಂಬಿದ ಬೇಗೆಯನು ತಣಿಸಿ
ಮನಕೆ ಚೆಲುಉಸಿರ ತುಂಬಿ ಬಿಟ್ಟೆ

ಹುಚ್ಚುಪ್ರೀತಿಯ ಅಲೆಯಲಿ ನನ್ನತೇಲಿಬಿಟ್ಟೆ
ಕೊಚ್ಚಿಹೋಯ್ತಲ್ಲಾ ನನ್ನ ಒಡಲು
ಮೊಸದಾಟಕೆ ಬರಿದಾಯ್ತು ಬಾಳಬಯಲು
ಎಲ್ಲೆಲ್ಲೂ ತುಂಬಿತು ಕಣ್ಣೀರ ಹೊನಲು
 
ಹರಿದೋಯ್ತು ಜೀವಿಗಳ  ಬಾಳ ಬಟ್ಟೆ
ಹಸಿರು ಉಣಿಸುವ ಆಶೆ ಸತ್ತೋಯ್ತು
ಜೀವ ಸೊತ್ತುಗಳೆಲ್ಲಾ ಕೊಚ್ಚಿ ಹೋಯ್ತು
ಮನುಜನಾಡಿದ ಮೋಸದಾಟದಲಿ
ಮರೆಯಲಾರದಂತ ನೋವು ನಿನ್ನಿಂದಾಯ್ತು

ಪಂಕಜಾ ಕೆ.
[26/11/2019, 6:30 AM] pankajarambhat: ಸೂರ್ಯಸ್ನಾನ
ನೋಡು ಬಾನಲಿ 
ಮೂಡ ಹೊಡೆಯಲಿ
ಹೊನ್ನ ಕಿರಣವು ಚೆಲ್ಲಿದೆ

ಮಂಜು ತೆರೆಯನು 
ಭರಧಿ ಸರಿಸುತ
ಮೆಲ್ಲ ಮೆಲ್ಲನೆ ಬರುತಿದೆ

ಹಸಿರು ಹುಲ್ಲಲಿ
ನಿಂತ ಹನಿಗಳು
ಕರಗಿ ಹರಿಯಿತು ಮೆಲ್ಲನೆ

ಬಾನ ಬಯಲಲಿ
ಚೆಲುವ ಬಣ್ಣವ
ಕಲೆಸಿ ಬರೆಯಿತು ಚಿತ್ರವ

ಎಲ್ಲಿ ನೋಡಲಿ 
ಚೆಲುವು ತುಂಬಿದೆ
ರವಿ ಉದಯಿಸುವ ಕ್ಷಣದಲಿ

ಬಿಸಿಯ ಸ್ಪರ್ಶವು 
ಹಿತವ ಕೊಡುತಲಿ
ಮೈ ಮನಕೆ ತುಂಬಿತು ಹರ್ಷವ

ಚಳಿಯ ಕರಗಿಸಿ
ಬಿಸಿಯ ಹುಟ್ಟಿಸಿ
ಜೀವಕೋಟಿಗೆ ತುಂಬಿತು ಉಸಿರನು

ಸೂರ್ಯ ಸ್ನಾನವ
ನಿತ್ಯ ಮಾಡಲು
ಆರೋಗ್ಯ ಭಾಗ್ಯವು ಸಿಗುವುದು
ಪಂಕಜಾ.ಕೆ.
[26/11/2019, 7:08 PM] pankajarambhat: ಮುನಿಸು

ಮಾತನಾಡದೆ  ಏಕೆ ನಿಂತೆ
ನೀಳ ಜಡೆಯ ಸುಂದರಿ
ಯಾವ ಯೋಚನೆ ನಿನ್ನ ಮನದಲಿ
ತುಂಬಿ ನಿಂತಿದೆ ಹೇಳು ನೀ

ಕಿಟಕಿಯೆಡೆಯಲಿ ಇಣುಕುತಿರುವ
ಚೆಲುವ ಚಂದಿರ ಕಂಡನೆ
ನಿನ್ನ ಮನದ ಭಾವವರಿತು
ಬೆಳ್ಳಿ ಚಂದಿರ ನಕ್ಕನೆ

ಮುದ್ದು ಮೊಗವು ಬಾಡಿತೇಕೆ
ತವರ   ನೆನಪು ಕಾಡಿತೆ
ಕೋಪತಾಪದಿ ನಲುಗಬೇಕೆ
ನಮ್ಮ ಬಾಳದು ಹೇಳು ನೀ

ಮುದ್ದು ಮುಖದ ಚೆಲುವು ಕುಗ್ಗಿದೆ
ತಾಳಲಾರೆನು ಈ ಮೌನವ
ಮುನಿಸು ತೊರೆದು ನಗುವ ತೋರೆ
ನೀನೇ ನನ್ನ ಬಾಳಿನ ಅರಗಿಣಿ 
ಪಂಕಜಾ.ಕೆ
[28/11/2019, 9:00 PM] pankajarambhat: ಗಜಲ್
ಜುಳು ಜುಳು ಹರಿಯುವ ನದಿಯಂತೆ ಮನಸು ಪ್ರಶಾಂತವಾಗಿದೆ ನಲ್ಲ
ಮುಂಜಾವಿನ ತಂಗಳಿಯ ತಂಪಿನಲಿ ನಲಿಯಬೇಕೆನಿಸಿದೆ ನಲ್ಲ

ನಿನ್ನ ಒಡನಾರವಿದ್ದರೆ ಬಾಳ ಬಳ್ಳಿಯಲ್ಲಿ ಹೂವು ಅರಳುವುದು
ನಗು ನಗುತ ಜೀವನದ ಸವಿಜೇನು ಸವಿಯೋಣವೆನಿಸಿದೆ ನಲ್ಲ

ನಾವಿಬ್ಬರು ಒಂದಾಗಿ ಕಡಲ ತಡಿಯಗುಂಟ ಸಾಗಬೇಕು
ಸಾಗರದ ಆಳದಂತಿರುವ ನಿನ್ನ ಮನವನ್ನು ತಿಳಿಯಬೇಕಾಗಿದೆ ನಲ್ಲ

ಬಾಳೊಂದು  ನಂದನವನ ವಾಗಿದೆಯಲ್ಲವೇ
ನೀಜತೆಯಲ್ಲಿದ್ದಾಗ  ಯುಗವೊಂದು ಕ್ಷಣದಂತಾಗಿದೆ ನಲ್ಲ

ಕಷ್ಟ ಸುಖಗಳನ್ನು ಸಮಾನವಾಗಿ ಕಾಣಬೇಕಲ್ಲವೇ ಪಂಕಜಾ
ತುಂಬು ಪ್ರೀತಿ ಯಿಂದ ಜೀವನದಲ್ಲಿ ಅರುಣೋದಯವಾಗಿದೆ ನಲ್ಲ
ಪಂಕಜಾ.ಕೆ
[29/11/2019, 10:03 AM] pankajarambhat: ಜೀವನ.  ಭಾವತರಂಗ. ಮುದ್ದಣ ಪ್ರಶಸ್ತಿ12
ರಾಗವೊಂದು ಬಾವಹಲವು
ಇರುವ ತರದಿ ಜೀವನ
ಅರಳಬೇಕು ಚಂದದಿಂದ
ಹೂವಿನಂತೆ ದಿನ ದಿನ

ನನ್ನ  ನಿನ್ನ  ಒಲವಿನಲ್ಲಿ
ಇರದು  ಎಂದು ಬಡತನ
ನಲಿಯಬೇಕು ನಿತ್ಯ ನಾವು
ಬಾರದಂತೆ   ಹಗೆತನ

ಸೂರ್ಯ ಚಂದ್ರ ಇರುವ ತನಕ
ಇರದು ನಮ್ಮ  ಜೀವನ
ಬರಿದೆ ಕೋಪ ತಾಪದಲ್ಲಿ
ನಲುಗದಿರಲಿ ಮನೆ ಮನ

ಹಾಲು ಜೇನು ಬೆರೆತಂತೆ
ಇರಲಿ ನಮ್ಮ ಜೀವನ
ಜೀವವಿರುವ ತನಕ ನಾವು
ಜತೆಯಲ್ಲಿದ್ದರೆ. ಪಾವನ

ಪ್ರಕೃತಿಯಲ್ಲಿ ವಿಹರಿಸುತ್ತ
ಪಡೆಯಬೇಕು  ಹೊಸತನ
ಬಾಳು ಬೆಳಗುವಂತೆ ನಾವು
ನಲಿಯಬೇಕು  ಅನುದಿನ
ಪಂಕಜಾ.ಕೆ.
[18/12/2019, 11:13 AM] pankajarambhat: ತಿಂಗಳ ಬೆಳಕು

ತಿಂಗಳ ಬೆಳಕಲಿ
ಅಂಗಳ ಬದಿಯಲಿ 
ಹಾಲಿನ ಹೊಳೆಯೇ ಹರಿಯುತಿದೆ

ತಂಪಿನ  ಕಿರಣವು
ಇಂಪಿನ ಗಾನವು
ಮೈಮನವನ್ನು ಮರೆಸುತಿದೆ

ಚಂದದ ಹೂಗಳು
ಅಂದದಿ ಅರಳುತ
ಕಂಪನು ಎಲ್ಲೆಡೆ ಹರಡುತಿದೆ

ಕೊಳದಲಿ ಅರಳಿದ
ತಳದಲಿ ನಲಿದಿಹ
ನೈದಿಲೆ ನಗುವನು ಬೀರುತಿದೆ

ಚಂದಿರ ಬರಲು
ಕಂದರ ವಿರಲು
ಮನದಲಿ ಸಂತಶ ತುಂಬುತಿದೆ

ಬಾನಲಿ ಓಡುತ
ಎಡೆಯಲಿ ಮಿನುಗುತ
ರಸಿಕರ ಮನವನು ಸೆಳೆಯುತಿದೆ
ಪಂಕಜಾ.ಕೆ
[20/12/2019, 12:32 PM] pankajarambhat: ಗಜಲ್  ( ಅಂಬಾರಿ ಬಗ್ಗೆ)

ಅಂಬಾರಿಯನು ಹೊತ್ತ ಜಂಬೂ ಸವಾರಿ ನೋಡೋಣವೇನೇ ಸಖಿ
ತಿರುಗುವ ರಾಟೆಯಲಿ ಜತೆಯಾಗಿ ಕುಳಿತುಕೊಳ್ಳೋಣವೇನೇ ಸಖಿ

ವರ್ಷ ವರ್ಷವೂ ಜಾತ್ರೆ ಮೇಳಗಳು  ಅಲ್ಲಲ್ಲಿ ಬರುತಿದೆ
ಸಂತೆಯಲಿ ಸುತ್ತಾಡುತ  ನಲಿಯೋಣವೇನೇ ಸಖಿ

ವರುಷಪೂರ್ತಿ ಸಂಭ್ರಮದ ಹಬ್ಬಗಳು  ಎಲ್ಲೆಡೆಯೂ ಇರುವವು
ನಿನ್ನೊಡನೆ ನಲಿದಾಡಲು   ನೆಪಬೇಕಲ್ಲವೇನೇ ಸಖಿ

ಅಷ್ಟು ದೂರನಿಂತೇಕೆ  ನಿತ್ಯ ಕಾಡುವೆ ನೀನು  ಹೇಳು
ಇನ್ನಷ್ಟು ಹತ್ತಿರಬರಲು  ಭಯಪಡಬಹುದೇನೇ ಸಖಿ

ನೋಡು ಬಾನಲ್ಲಿ ಚಂದಿರ ಎಷ್ಟೊಂದು  ನಗುತಿರುವನು
ನಮ್ಮ ಸರಸ ಅವನಿಗೂ ಖುಷಿ ಕೊಟ್ಟಿತೇನೇ ಸಖಿ

ಹೊಸ ಬಟ್ಟೆಯನ್ನು ಉಟ್ಟು ಸಂಭ್ರಮದಿಂದ ನಲಿದಾಡುವೆಯಲ್ಲ 
ನನ್ನ ನೋಡಿದಾಗಲೆಲ್ಲಾ ಒರೆನೋಟವ ಬೀರುವೆಯೇನೇ ಸಖಿ

ನಿನ್ನ ನೆನಪಲ್ಲಿ ನಿತ್ಯ ಮುಳುಗಿರುವೆ ನಾನು ಪಂಕಜಾ
ಬಾಳ ಪಯಣದಲಿ ಜತೆಯಾಗಿ ಸಾಗೋಣವೇನೇ ಸಖಿ

ಪಂಕಜಾ.ಕೆ.
[8/1/2020, 3:04 PM] pankajarambhat: .ಹಸಿರು..ಉಸಿರು

ಹಸಿರಿನ ಸಿರಿಯಲಿ ಉಸಿರಿನ ಬಲೆಯಲಿ
ನಲಿಯುತಲಿರುವುದು ಮನೆಯೊಂದು

ಸುತ್ತಲೂ ಹಸಿರಿನ ಬೆಟ್ಟಗುಡ್ಡಗಳು ತುಂಬಿ
ಸ್ವರ್ಗವು ಧರೆಗಿಳಿದಂತೆ ತೋರುವುದು

ಮುಂದಿನ ಅಂಗಳ ತುಂಬಾ ಬಿತ್ತಿದ ಬೆಳೆಯು
ಹಸಿರಿನ ಹಾಸಿಗೆ ಹಾಸಿದ ತೆರದಿ ತೋರುವುದು 

ಚಂದದ ಮನೆಯಲಿ ಅಂದದಿ ನಲಿಯುತ
ಹಸಿರಿನ ಉಸಿರನು ಸವಿಯುತ ನಲಿಯೋಣ

ಹಳ್ಳಿಯ ಮನೆಯದು ಚಂದದ ಬಂಧವು
ಪ್ರಕೃತಿಯ ಮಡಿಲೇ ಸ್ವರ್ಗಸದೃಶ  ಜೀವನವು

ನೀರಿಗೆ ಉಸಿರಿಗೆ ಬರವೇ ಇಲ್ಲದ
ಪ್ರಕೃತಿ ರಮ್ಯ  ಸುಂದರ ತಾಣವದು

ಬೆಳಗಿನ ಜಾವವೇ ಚುಮು ಚುಮು ಚಳಿಯಲಿ
ಬಿಸಿ ಬಿಸಿ ಕಾಪಿಯ ಹೀರುವ ಆನಂದ

ತಿಂಡಿಯ ತಿಂದು  ಗದ್ದೆಯಲ್ಲಿ ದುಡಿದು
ಹಂಡೆಯ ಬಿಸಿನೀರಿನಲಿ ಮೀಯುವ ಸುಖ

ಜಾಗಟೆ ಗಂಟೆಯ ಸದ್ದನು ಮಾಡಿ
ಭಕುತಿಯಲಿ ದೇವರ ಪೂಜೆಯ ಮಾಡಿ

ಬಿಸಿ ಬಿಸಿ ಊಟದ ಸವಿಯನು ಸವಿದು
ನಿದ್ದೆಯ ಮತ್ತಲಿ ಮೈಯನು ಚಾಚಿ

ಸಂಜೆಯ ಕಾಪಿಯಾ ಸಮಯಕೆ ಎದ್ದು
ಒತ್ತಡವಿಲ್ಲದೆ ಬದುಕುವ ಚಂದ
ಹಳ್ಳಿಯ ಮನೆಯ ವೈಭೋಗದ ದೃಶ್ಯ

ಪಂಕಜಾ.ಕೆ.
[29/1/2020, 9:02 PM] pankajarambhat: ಗಜಲ್.  
ಮನದ  ಜಂಜಾಟಗಳ ಮರೆಸಿತು ನಿನ್ನ ನಗು
ಹೊಸ ಕನಸುಗಳ  ಬಾಳಲಿ ಬಿತ್ತಿತು  ನಿನ್ನ ನಗು

ಮಗುವಿರುವ ಮನೆಯೊಂದು ನಂದನವನ
ಬರಿದಾದ  ಮನೆಯನ್ನು ಬೆಳಗಿತು  ನಿನ್ನ ನಗು

ತೊದಲು  ನುಡಿಗಳಿಂದ  ಎಲ್ಲರನು ಸೆಳೆದೆ
ಹೂವೊಂದು ಬಿರಿದಂತೆ ಆಯಿತು ನಿನ್ನ ನಗು

ಮುದ್ದು ಬಾಲಕೃಷ್ಣನೆ  ನೀನಲ್ಲವೇ ಕಂದ
ಜೀವನದಲ್ಲಿ ಉಲ್ಲಾಸ ತುಂಬಿತು ನಿನ್ನ ನಗು

ನಿದ್ದೆಯಲ್ಲೂ ನಕ್ಕು ಮೋಡಿ ಮಾಡಿದೆಯಲ್ಲ
ನಾಟ್ಯವಾಡುವ ನವಿಲಂತೆ  ಕುಣಿಸಿತು  ನಿನ್ನ ನಗು

ಬೆಳದಿಂಗಳ ಸ್ಪರ್ಶಕೆ ಅರಳುವುದಲ್ಲವೇ ಪಂಕಜ
ಮುಗ್ಧ ಮಗುವೇ ಮನಸೆಳೆಯಿತು ನಿನ್ನ ನಗು 
ಪಂಕಜಾ.ಕೆ
[30/1/2020, 10:28 PM] pankajarambhat: ಭಾವಯಾನ  (ಭಾವಗೀತೆ)

ಚುಮು ಚುಮು ಚಳಿಯು ಲಗ್ಗೆಯಿಟ್ಟಿದೆ
ಮೈಮನಕೆ ಜಡತೆಯನು ತಂದೊಡ್ಡಿದೆ

ಮಾಮರದ ತುಂಬೆಲ್ಲ ಹೂಗಳರಳಿದೆ
ಕೋಗಿಲೆಯು ಮಧುರವಾಗಿ ಕುಕಿಲಿಡುತ್ತಿದೆ
ಭೂರಮೆಯು ಹಸಿರುಟ್ಟು ತೊನೆದಾಡಿದೆ
ದುಂಬಿಗಳು ಮಧುಹೀರುತ ನಲಿದಾಡಿವೆ

ನಿನ್ನೊಡನೆ  ಪ್ರಕೃತಿಯಲಿ ನಲಿದಾಡೋ ಆಸೆ
ಅನುರಾಗದ ಅಲೆಗಳಲಿ ತೇಲಾಡೋ ಬಯಕೆ
ಕಣ್ಣಿನಲ್ಲಿ ನಿನ್ನ ರೂಪ ತುಂಬಿ ನಿಂತಿದೆ
ಮನದಲ್ಲಿ ಪ್ರೇಮಗಾನ ಗುಣುಗುಣಿಸಿದೆ

ನನ್ನೆದೆಯ ವೀಣೆಯನು ನೀ ಮೀಟಿದೆ
ಹೊಸರಾಗ ಹೊಸ  ಬಯಕೆ ಹುಚ್ಚೆದ್ದಿದೆ
ಆಸೆಗಳ ದುಂಬಿಗಳು ಮನ ಕೊರೆದಿದೆ
ನೂರಾರು ಹೊಸ ಕನಸ ನೀ ಬಿತ್ತಿದೆ
ಪಂಕಜಾ.ಕೆ.

Comments

Post a Comment

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.