Skip to main content

Posts

Showing posts from November, 2024

ಸೊಬಗಿನ ಸಿರಿ

 ಸೊಬಗಿನ ಸಿರಿ ಚಿತ್ರಕವನ (ಭಾಮಿನಿ ಷಟ್ಪದಿಯಲ್ಲಿ) ಹಸಿರು ತುಂಬಿದ ಗದ್ದೆ ಬಯಲಲಿ  ಬಸಿದು ಸೋರುವ  ಸಿರಿಯ ಸೊಬಗಲಿ ಹೊಸತು ಭಾವವ ತುಂಬಿ ತುಳುಕುತ ತನುವು  ಕುಣಿಯುತಿದೆ ಬೆಸೆದ ಬಂಧದ ತೆರದಿ ಗುಡ್ಡವು ಹೊಸೆದು ಬಿಟ್ಟಿದೆ ಬಾನ ಬಯಲನು ಹಸಿತ ಮನದಲಿ  ಕನಸ ಬಿತ್ತುತ ಸೊಬಗ ತೋರುತಿದೆ  ಬಾನ ಬಯಲಲಿ ರಂಗು ತುಂಬುತ  ಬಾನ ರಾಜನು ಮೂಡಿ ಬಂದನು ಸೋನೆ ಮಳೆಯಲಿ ನೆನೆದ ಭಾವವು ಮನದಿ  ತುಂಬುತಿದೆ ಕಾನನದ ಸಿರಿ ತುಂಬಿ ತುಳುಕಿದ ತಾಣ ಕಾಣಲು ತನುವು ಮರೆಯಿತು ಮೇನೆಯೇರಿದ ರಾಜನಂತೆಯೆ  ಹರುಷವುಕ್ಕುತಿದೆ  ಜಗವ ಮರೆಸುವ  ನೋಟ ನೋಡುತ ಸೊಗವು ತುಂಬಿತು  ಮನದ ಬಯಲಲಿ ಬಗೆಯ ಸೆಳೆಯುವ ಚಿತ್ರ ಮನದಲಿ ಕನಸ ಬಿತ್ತಿಹುದು  ನಗೆಯು ಮೊಗದಲಿ ಚಿಮ್ಮುತಿರುವುದು ಹಗೆಯು. ಕಳೆಯುತ  ನೇಹ ಮೂಡಿತು ಜಗದ ಜಂಜಡ ಕಳೆದು ಮನಸಿಗೆ ಶಾಂತಿ ತುಂಬುವುದು ಪಂಕಜಾ. ಕೆ.ರಾಮಭಟ್

ಹಚ್ಚೋಣ ಕನ್ನಡದ ಹಣತೆ

ಹಚ್ಚೋಣ ಕನ್ನಡದ ಹಣತೆ (ಹಂಸ ಗತಿ ವೃತ್ತ) ಬೆಳಕನು ಬೀರುವ ಹಬ್ಬದಲೆಲ್ಲರು ಮಾಡುವ ಸೇವೆಯ ದೇವರಿಗೈ  ಕಳೆಯಲು ಕತ್ತಲು ಮೋದವ ತಂದಿತು ಹಾರಿದೆ ಬಾನಲಿ ಬಾಣವದೈ  ಹೊಳೆಯುವ ದೀಪದ ಕಾಂತಿಯಲೆಲ್ಲರು  ಕೂಡುತ ಹಾಡುವರಾಗದಲೈ  ಬೆಳೆಯಲು ಬಂಧವು ತೋರಿತು ಹಾಸವು ಮೋಡಿಯ ಮಾಡಿತು ಹಬ್ಬವದೈ  ಹಣತೆಯ ಹಚ್ಚುತ ತಾಯಿಗೆ ವಂದಿಸಿ ಪಾದಕೆ ಬಾಗುವ ಭಕ್ತಿಯಲೈ  ಮಣಿಯುತ ಕನ್ನಡ ಮಾತೆಯ ಪಾದಕೆ   ಹಾಸವ ಬೀರುತ  ವಂದಿಸಿರೈ ಕುಣಿಯುವ ಬೆಳ್ಳನೆ ಕಾಣುವ ನೋಟಕೆ ಸೋಲುತ ಬೇಗನೆ  ಸೇರುತಲೈ  ತಣಿಸುತ ನೋವನು ದೂಡುತ  ಬೇಸರ ಬಾನಲಿ ಹಾರಿಸಿ ಬಾಣವ ನೀ ಪಂಕಜಾ. ಕೆ.ರಾಮಭಟ್.

ಒಲವೇ ಜೀವನ

ಒಲವೇ ಜೀವನ ಕಣ್ಣ ಹನಿಯು ಮುತ್ತಿನ ತೆರದಲಿ ಜಾರುತ ಮನದಾ  ಬೇಗುದಿಯನು ತಣ್ಣಗೆ ಕಳೆಯಿತು ಬೇಸರವೆಲ್ಲವ. ಜಾಡಿಸಿ  ಮನಸಿನ ಚಿಂತೆಯನು ನಲ್ಲನ ಒಲವಿನ  ಕಣ್ಣಿನ ನೋಟಕೆ ಮೂಡಿತು ಹೊಸ ಹೊಸ ಕನಸುಗಳು ಬೆಲ್ಲದ ಸವಿಯನು ಸವಿದಂತಾಗಿದೆ ತೂರಿತು ಮದನನ ಬಾಣಗಳು ಹೊಸತಿನ ಭಾವನೆ ಮನದಲಿ ತುಂಬುತ ತನುವಿಗೆ ತಂದಿತು ಕಂಪನವ ಬೆಸೆದಿಹ ಬಂಧವು ಮೈಮನ ಅರಳಿಸಿ ತೆರೆಸಿತು. ಸುಂದರ ಭಾಂದವ್ಯವ ಹೃದಯದ ಭಾಷೆಯ  ಅರಿಯುವ ಜೀವವು ಬಳಿಯಲ್ಲಿರೆ ಸೊಗವೀ ಬಾಳು ಮದುವೆಯ ಬಂಧವು ಬೆಸೆದಿದೆ ಜೀವವ ಹಿಡಿಯುತ  ಸಾಗಲು ತೋಳು ಪಂಕಜಾ. ಕೆ.ರಾಮಭಟ್

ಗುಬ್ಬಿ ಹಕ್ಕಿ

ಗುಬ್ಬಿ ಹಕ್ಕಿ ಉತ್ಸಾಹಲಯ ಚಿಕ್ಕದಾದ ಗಿಡದ ಮೇಲೆ ಚಿಕ್ಕ ಹಕ್ಕಿ ಕುಳಿತಿದೆ ರೆಕ್ಕೆಯನ್ನು ಮುದುಡಿಕೊಂಡು ತಕ್ಕ ಜಾಗ ಹುಡುಕಿದೆ ಗೂಡನೊಂದು ಕಟ್ಟಲೆಂದು ಮಾಡುತಿತ್ತು ಯೋಚನೆ ಹಾಡನೊಂದು ಹಾಡುತಿದ್ದು ನೋಡುತಿತ್ತು ಸುಮ್ಮನೆ ಗೆಳೆಯರನ್ನು ಕೂಡಿಕೊಂಡು ಬಳಗವನ್ನು ಬೆಳೆಸುತ  ಕಳೆಯುತಿತ್ತು ಗುಬ್ಬಿ ಹಕ್ಕಿ ಹೊಳೆಯ ಬದಿಯಲಾಡುತ ಹಬ್ಬಿ ಬಿಟ್ಟ ಶಬ್ದದಿಂದ ಗುಬ್ಬಿ ಮರಿಯು ಹೆದರಿದೆ ದಿಬ್ಬದಂಥ ಮನೆಯ ಮಾಡು ಗುಬ್ಬಿ ಮರಿಯ ದಬ್ಬಿದೆ  ಪಂಕಜಾ. ಕೆ.ರಾಮಭಟ್