Skip to main content

Posts

Showing posts from April, 2025

ಸಾರ್ಥಕ ಬದುಕು

ಸಾರ್ಥಕ ಬದುಕು  ಘಮವ ಬೀರುತ ಅರಳಿ ಬಿಟ್ಟಿದೆ ಹೊನ್ನ ಬಣ್ಣದ ಹೂಗಳು ಸುಮದ  ಮಧುವನು ಹೀರಲೆಂದು   ಮುತ್ತಿ ಬರುತಿವೆ   ದುಂಬಿಗಳು ದೊಡ್ಡ ಗಾತ್ರದ  ಭೃಂಗ ಕುಳಿತಿದೆ  ಸಣ್ಣ ಹೂವಿನ ಮಧ್ಯದಿ ಪರಾಗ ಸ್ಪರ್ಶಕೆ ದಾರಿಯಾಗಿದೆ ಭೃಂಗಗಳ ಒಡನಾಟದಿ  ಕಣ್ಣು ತುಂಬುವ ಚೆಲುವ ಹೂವದು ದುಂಬಿಯಾಟಕೆ ಬಳಲಿದೆ ಮಧುವ ಸುರಿಸುತ ನಗುತ ನಲಿಯುತ ಒಂದೇ ದಿನದಲಿ ಬಾಡಿದೆ  ಒಂದೇ ದಿನದ ಬದುಕಿದರದಾದರೂ ಜೀವ ಸಾರ್ಥಕ ಪಡೆದಿದೆ ದೇವ ಪಾದದಿ  ಹೆಣ್ಣ ಮುಡಿಯಲಿ ನಕ್ಕು ಕಂಗಳ ಸೆಳೆದಿದೆ ಪಂಕಜಾ. ಕೆ.ರಾಮಭಟ್.

ಶೂರ್ಪನಖಿ ಕಾಟ

*ಶೂರ್ಪನಖಿಯ ಕಾಟ* ಪದ್ಮಮುಖಿ (ಅಂಬಿನಿ) ವೃತ್ತ ನಾಟಕವಾಡುತ  ರಾವಣನಾನುಜೆ ಬಂದಿಹಳೈ ಕೂಟಕೆ ಬಾರೆಲೆಯೆನ್ನುತ ರಾಮನ ಕಾಡಿದಳೈ ಮಾಟವ ಮಾಡುತ ಕಣ್ಣಲೆ ಬಾಣವ ಹೂಡಿ ದಳೈ ಕಾಟವ ತಾಳದೆ  ರಾಮನು ದೂರಕೆ ನೂಕಿದನೈ  ಕೋಪದಿ ಲಕ್ಷ್ಮಣನಾಕೆಯ ಮೂಗನು  ಕೊಯ್ದಿಹನೈ ತಾಪವ ತಾಳದೆ ರಕ್ಕಸಿ ಕೂಗುತಲೋಡಿದಳೈ ಶಾಪಕೆ. ಹುಟ್ಟಿದ ರಕ್ಕಸ  ವೇಷವ ಹಾಕಿದನೈ ರೂಪಸಿ ಸೀತೆಗೆ  ಮೋಡಿಯ ಮಾಡಲು ಬಂದಿಹನೈ  ಚಿನ್ನದ ಜಿಂಕೆಯು ಸೀತೆಯ  ಕಣ್ಣಿಗೆ ಬಿದ್ದಿಹುದೈ ತಣ್ಣನೆಯಾಕೆಗೆ ಮೋಹಕ ಮೋಡಿಯ   ಹಾಕಿಹುದೈ   ಕಣ್ಣಿಗೆ ಕಟ್ಟುವ ಸುಂದರ ರೂಪದ ಜಿಂಕೆಯದೈ  ಮುನ್ನವೆ ಬೇಕೆನಗೆನ್ನುತ ರಾಮನ ಕಾಡಿದಳೈ ಪಂಕಜಾ. ಕೆ ರಾಮಭಟ್

ಅರಿವು ಮೂಡಿದಾಗ ಕಥೆ

ಅರಿವು ಮೂಡಿದಾಗ   ಶ್ರೀಮಂತನಾದ ರಮೇಶನಿಗೆ ತಂದೆ ಕೇಳಿ ಕೇಳಿದಾಗಳೆಲ್ಲಾ  ಹಣ ಕೊಡುತ್ತಿದ್ದುದರಿಂದ  , ಹಣದ ಬೆಲೆ ತಿಳಿದಿರಲಿಲ್ಲ .  ಕಾಲೇಜಿಗೆ ನೆಪ ಮಾತ್ರಕ್ಕೆ ಹೋಗುತ್ತಾ ಗೆಳೆಯರ ಜತೆ  ಅಲ್ಲಿ ಇಲ್ಲಿ ತಿರುಗಾಡಿ ಮಜಾ ಮಾಡುವುದೇ ಅವನ ಕಾಯಕವಾಗಿತ್ತು. ಬಡವರೆಂದರೆ  ತಾತ್ಸಾರ ಮನೊಭಾವ ಹೊಂದಿದ್ದ ಆತ,  ಹರಿದ ಬಟ್ಟೆ ಹಾಕಿದ  ಬಡವರನ್ನು ಕಂಡರೆ ದೂರ ಸರಿಯುತ್ತಿದ್ದ.                 ಒಂದು ದಿನ ಸ್ನೇಹಿತರೆಲ್ಲ ಸೇರಿ ಜಾಲಿ ರೈಡ್ ಹೋಗುವುದೆಂದು ನಿರ್ಣಯಿಸಿದರು. ನಿಶ್ಚಿತ  ಸ್ಥಳಕ್ಕೆ ಯಾರು ಮೊದಲು ತಲುಪುತ್ತಾರೋ. ಅವರಿಗೆ 10000  ಬಹುಮಾನ ಎಂದು ಘೋಷಿಸಿದ ರಮೇಶ, ತಾನು ಅವರ   ಜತೆ  ತನ್ನ ಬೈಕಿನಲ್ಲಿ ಹೊರಡುವ ನಿರ್ಧಾರ ಮಾಡಿದ.  ಎಲ್ಲರೂ ಒಂದೊಂದು ದಾರಿ ಹಿಡಿದು ತಮ್ಮತಮ್ಮ ಬೈಕ್ ಚಲಾಯಿಸಿದರು. ರಮೇಶನೂ ವೇಗವಾಗಿ ಬೈಕ್ ಓಡಿಸುತ್ತಾ ಇರುವಾಗ ತಿರುವಿನಲ್ಲಿ ಆಯ ತಪ್ಪಿ ಕೆಳಗಿನ ಪ್ರಪಾತಕ್ಕೆ ಬೈಕ್ ಸಮೇತ ಉರುಳಿ ಬಿಟ್ಟ .              ಕಣ್ಣು ಬಿಟ್ಟಾಗ ತಾನೊಂದು ಹುಲ್ಲಿನ ಗುಡಿಸಿಲಿನಲ್ಲಿ ಇರುವುದು ತಿಳಿದು ಆತ ಮೆಲ್ಲಗೆ ಏಳಲು ಪ್ರಯತ್ನಿಸಿದಾಗ , ಮೈ ಕೈಯೆಲ್ಲ ನೋವಾಗಿ ಸಣ್ಣಗೆ ನರಳಿದ  .ಅಷ್ಟರಲ್ಲಿ ಅಲ್ಲಿಗೆ ಬಂದ ಕೆದರಿದ ಕೂದಲ ಹರಿದ ಬಟ್ಟೆ ತೊಟ್...

ಮಧುಮಾಸ

  ಮಧು ಮಾಸ ಕತ್ತನೆತ್ತಲು ಸುತ್ತು ಮುತ್ತಲು ಹಸಿರು ಹಂದರ ಹಾಸಿದೆ  ಚಿತ್ತವನ್ನು ಸೆಳೆದು ಬಿಡುತಲಿ ಬೇವು ಮಾವು ಚಿಗುರಿದೆ ನೆತ್ತಿ ಸುಡುವ ಬಿಸಿಲ ಝಳದಲೂ  ತಂಪು ಗಾಳಿಯ ಬೀಸಿದೆ ಕತ್ತಿ ಮಸೆಯದೇ   ವಸುಧೆಯೊಡಲನು ಉಳಿಸಿ ಬೆಳೆಸಬೇಕಿದೆ ಮಾಮರದಲಿ ಕುಳಿತು  ಕೋಗಿಲೆ ಮಧುರ ಗಾನವ ಹಾಡಿದೆ ಚಾಮರವ ಬೀಸುತಲಿ ತರುಲತೆಗಳು ನಲಿದಿವೆ ಭೂಮಿ ತಾಯಿಯ  ಮಡಿಲಿನಲ್ಲಿ  ನವೋಲ್ಲಾಸ ಮೂಡಿದೆ  ಬಾನಿನೆತ್ತರ ಬೆಳೆದ  ಮರಗಳು ಫಲವ ತುಂಬಿ ಬಾಗಿದೆ ವಸಂತ ಋತುವಿನ ಸೊಬಗ ಕಾಣಲು ಎರಡು ಕಣ್ಣು ಸಾಲದು ಹೊಸತು ಭಾವವ ಮನದಿ  ತುಂಬಿದೆ ಹೂವು ಹಣ್ಣುಗಳ ಸಾಲದು    ಹಸಿರು ಚಿಗುರಿದ ಗಿಡಮರಗಳು ತಲೆಯ ತೂಗುವ   ಪರಿಯಲಿ ರಸಿಕ  ಮನಗಳು ನಲಿಯುತಿದೆ ಹಸಿರು ತುಂಬಿದ ಧರೆಯಲಿ  ಪಂಕಜಾ. ಕೆ.ರಾಮಭಟ್