ಪ್ರೇಮಿಗಳ ಸಲ್ಲಾಪ ಚಂದಿರನು ಬಾನಲ್ಲಿ ಮೋಡಗಳ ಎಡೆಯಲ್ಲಿ ನಸುನಗುವ ಬೀರುತ್ತ ಬರುತಿರುವನು ಹುಣ್ಣಿಮೆಯ ದಿನದಲ್ಲಿ ತಾರೆಗಳ ಜತೆಸೇರಿ ಬೆಳದಿಂಗಳ ಬೆಳಕನ್ನು ಹರಿಸುತಿಹನು ಶಶಿ ಕಿರಣ ಸೋಕುತಿರೆ ಕೊಳದಲ್ಲಿ ತುಂಬಿರುವ ನೈದಿಲೆಯು ದಳ ತೆರೆದು ಅರಳುತ್ತಿದೆ ಶಶಿಯೊಡನೆ ಬೆರೆಯುತ್ತ ಚೆಲ್ಲಾಟವಾಡುತ್ತ ನೋಡುಗರ ಮೈಯನ್ನು ತಾ ಮರೆಸಿದೆ ಬೆಳದಿಂಗಳ ಬೆಳಕು ಧರೆಯನ್ನು ತಬ್ಬುತಿ ರೆ ಪ್ರೇಮಿಗಳು ಮೈಮರೆತು ಕುಳಿತಿರುವರು ಚೆಂದುಟಿಯ ರಸವನ್ನು ಮೈಮರೆತು ಸವಿಯುತ್ತ ರಸಗಳಿಗೆಯಲ್ಲಿ ಮೈ ಮರೆತಿರುವರು ಪ್ರೇಮಿಗಳ ಸರಸವನು ನೋಡುತ್ತ ಚಂದಿರನು ಮೋಡಗಳ ಮರೆಯಲ್ಲಿ ಮುಖ ಮರೆಸಿದ ಒಲವನ್ನು ಸುರಿಸುತ್ತ ತಿಂಗಳಿನ ಬೆಳಕಿನಲಿ ನವ ಜೋಡಿಗಳಿಗೆ ತಾ ಸಹಕರಿಸಿದ ಪಂಕಜಾ.ಕೆ.ರಾಮಭಟ್
ಹಸಿರಿನ ವನಸಿರಿ (ಒತ್ತಕ್ಷರವಿಲ್ಲದ ಕವಿತೆ) ಮಾಗಿಯ ಚಳಿಯಲಿ ಬೀಗುತ ನಿಂತಿದೆ ಸೋಗನು ಹಾಕದ ಗಿಡಮರವು ಸಾಗುವ ಮೋಡವು ಸೆಳೆಯಿತು ಕಂಗಳ ರಾಗದಿ ಹಾಡಿದೆ ಕೋಗಿಲೆಯು ಕಾಡುತಿದೆ ನೆನಪು ಎದೆಯನು ಹಿಂಡುತ ಮನವನು ಪೀಡಿಸಿ ಬಿಡುತಿಹುದು ಗಾಳಿಗೆ ತೊನೆಯುವ ಹಸಿರಿನ ಗಿಡಗಳು ಮನಸಿಗೆ ಶಾಂತಿಯ ಕೊಡುತಿಹುದು ಹೂಗಳು ಅರಳುತ ಗಂಧವ ಸೂಸಿದೆ ದುಂಬಿಯು ಮಧುವನು ಹೀರುತಿದೆ ಮನಸಿನ ಬೇಸರ ಕಳೆಯುವ ತಾಣವು ಸೊಬಗಿನ ಸಿರಿ ಮನ ತಣಿಸುತಿದೆ ನೋಡುವ ಕಂಗಳಿಗೆ ತಂಪನು ತರುತಿದೆ ಉಸಿರನು ಕೊಡುತಿದೆ ತನುಮನಕೆ ಹರಿಯುವ ನೀರಿನ ಮಂಜುಳ ನಾದವು ಕಳೆಯಿತು ಮನಸಿನ ಬೇಸರವ ಪಂಕಜಾ. ಕೆ.ರಾಮಭಟ್